ಸರ್ಪಭ್ರಮೆ / Sarpabhrame
Author: M.R. Dattathri
Pages: 208
Edition: 2024
Book Size: 1/8th Demmy
Binding: Paper Back
Publisher: Ankita Pustaka
Description
ಸರ್ಪಭ್ರಮೆ / Sarpabhrame – ಕೃತಿಯು ಎಂ.ಆರ್. ದತ್ತಾತ್ರಿ ಅವರ ಕಾದಂಬರಿಯಾಗಿದೆ. ಈ ಕೃತಿಯು ಸಾಹಿತ್ಯದ ಅಭಿರುಚಿಯುಳ್ಳ ಅಮೇರಿಕದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನ ಕುರಿತು ಮಾತನಾಡುತ್ತದೆ. ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ‘ನಾವು ಬರೆದದ್ದನ್ನು ನಾವೇ ಓದುವುದರಲ್ಲೇನಿದೆ ಮಣ್ಣು, ಆಸಕ್ತಿಯಿರುವುದೇ ಬೇರೆಯವರ ವಿಚಾರಗಳಲ್ಲಿ, ಅದೂ ಕದ್ದು ತಿಳಿಯುವುದರಲ್ಲಿ’ ಎಂದು ನೀವು ಗೊಣಗಿದರೆ ನಾನದನ್ನು ನಿರಾಕರಿಸಲಾರೆ. ಒಬ್ಬ ಕತೆಗಾರನಾಗಿ ಹೇಗೆ ನಿರಾಕರಿಸಲಿ? ಕತೆ ಬರೆಯು ವುದರ ಮತ್ತೊಂದು ಅರ್ಥವೇ ಮತ್ತೊಬ್ಬರ ಡೈರಿಯನ್ನು ಓದುವುದು, ಬರೀ ಓದುವುದಲ್ಲ, ಕದ್ದು ಓದುವುದು. ತನ್ನಷ್ಟಕ್ಕೆ ಮಗ್ನಳಾಗಿ ಗಾಡಿಯವನ ಹತ್ತಿರ ಚೌಕಾಸಿ ಮಾಡಿ ತರಕಾರಿ ಕೊಳ್ಳುತ್ತಿರುವ ಸ್ನಿಗ್ಧ ಸುಂದರ ಯುವತಿಯನ್ನು ಕಣ್ಣುಗಳಲ್ಲೇ ಕದ್ದು ಮನೆಗೆ ಒಯ್ದಂತೆ ಕತೆಯೊಂದು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗಗಳನ್ನು ಅವನರಿವಿಲ್ಲದಂತೆ ಅಪಹರಿಸಿಬಿಡುತ್ತದೆ. ವ್ಯಕ್ತಿಯನ್ನು ಅಪಹರಿಸದೆ ಕತೆ ಹುಟ್ಟುವುದಿಲ್ಲವಾಗಿ ‘ಯಾರದ್ದೋ ಡೈರಿ ಓದಿದೆ ಮಾರಾಯಾ’ ಎಂದು ನೀವು ನನ್ನ ಕಿವಿಯಲ್ಲಿ ಪಿಸುಗುಟ್ಟಿದರೆ ನಾನು ಕಣಜದಿಂದ ಕಚ್ಚಿಸಿಕೊಂಡ ನಾಜೂಕುಮನುಷ್ಯನಂತೆ ನೋವಿನಲ್ಲಿ ನರಳುವುದಿಲ್ಲ. ಆದರೆ, ನೀವು ಓದಿದ್ದು ನನ್ನ ಡೈರಿಯನ್ನೇ ಎಂದು ತಿಳಿದರೆ ಅದನ್ನು ಹೇಗೆ ತೆಗೆದು ಕೊಳ್ಳುತ್ತೇನೋ ಗೊತ್ತಿಲ್ಲ. ಅಪಹೃತವಾಗುವುದು ಬೇರೆ, ಅಪಹರಿಸುವುದು ಬೇರೆ, ಮತ್ತು ಅಪಹರಣದ ಕತೆ ಕೇಳುವುದು ಬೇರೆ. ನೀವು ನಾನೇ ಆಗದಿದ್ದರೆ- ಅಂದರೆ ಸಂದೀಪ ಎನ್ನುವ ಹೆಸರಿನ; ನಲ್ವತ್ತು ವರ್ಷಗಳ ವಯಸ್ಸಿನ; ಐದು ಅಡಿ ಹತ್ತು ಇಂಚು ಎತ್ತರದ ಮತ್ತು ನಾನೇ ವಿಲಕ್ಷಣವೆಂದು ಬಗೆಯುವ ಗುಣಗಳ ವ್ಯಕ್ತಿಯಾಗದಿದ್ದರೆ, ಹಾಗೂ ಈ ಡೈರಿಯು ನಿಮಗೆ ಬಸ್ಸಿನ ಸೀಟಿನ ಮೇಲೋ, ರೈಲಿನ ಅಪ್ಪ ಬರ್ತಿನಲ್ಲೋ, ವಿಮಾನದ ಸೀಟ್ ಪಾಕೇಟಿನಲ್ಲೋ ಅನಾಥವಾಗಿ ಸಿಕ್ಕಿರದಿದ್ದರೆ, ಬಹುಶಃ ನಿಮಗೆ ನಾನೇ ಓದಲು ಕೊಟ್ಟಿರಬೇಕು. ಇದು ಕತೆ ಎಂದು ಹೇಳಿ ನಂಬಿಸಿ ಕೊಟ್ಟಿರಬಹುದು. ಹಾಗಿದ್ದರೆ ಪರವಾಗಿಲ್ಲ, ಮುಂದೆ ಓದಿ. ಮತ್ತೇನು ಮಾಡಬಲ್ಲಿರಿ ನೀವು.
