ಕಾಯಾ / Kaayaa
Author:Guruprasad Kaginele
Pages:340
Edition: 2025
Book Size: 1/8th Demmy
Binding: Paper Back
Publisher: Ankita Pustaka Prakashana
Description
ಕಾಯಾ / Kaayaa -ಗುರುಪ್ರಸಾದ್ ಕಾಗಿನೆಲೆ ಅವರ ‘ಕಾಯಾ’ ಕಾದಂಬರಿ ಮೂರು ಭಾಗಗಳನ್ನು ಹೊಂದಿದ್ದು, 33 ಅಧ್ಯಾಯಗಳ ಸಂಕಲನವಾಗಿದೆ. ಮೊದಲ ಭಾಗದಲ್ಲಿ ಒಂದೇ ಅಧ್ಯಾಯವಿದ್ದು, ಭೀಮಸೇನರಾವ ಜಯತೀರ್ಥಾಚಾರ್ಯ ಮಲಖೇಡ ಎಂಬ ಶೀರ್ಷಿಕೆಯನ್ನು ಹೊಂದಿದೆ. ಎರಡನೇ ಭಾಗದ ಎರಡನೇಯ ಅಧ್ಯಾಯವು ಕುಚೋನ್ನತಿ, ಮೂರನೇಯ ಅಧ್ಯಾಯವು ಕಸ್ತೂರಿ, ಕಸ್ತೂರಿ ರಂಗನ್ , ನಾಲ್ಕನೆಯದು ಮಿ ಟೂ, ಐದನೆಯ ಅಧ್ಯಾಯ ಜಾಂಬೀಸ್ ಹೀಗೆ 33 ಅಧ್ಯಾಯಗಳಿವೆ.
ಕಾಯಾ ಕಾದಂಬರಿಯ ಕುರಿತು ಲೇಖಕಿ ಕಾವ್ಯಾ ಕಡಮೆ, ‘ಕಾಯಾ ಕಾದಂಬರಿ ಬರೆದು ತೋರಲು ಹೊರಟಿರುವುದು ಮನುಷ್ಯ ಬಾಳ್ಮೆಯಲ್ಲೇ ಬೆರೆತು ಹೋಗಿರುವ ಹಪಾಪಿತನವನ್ನು. ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ, ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ ಬೇರೂರಿದವರು.ತಿರುವು ಮುರುವಾಗಿ ತೊಟ್ಟ ಬಟ್ಟೆಯ ಗುಂಟ ಹೊಲಿಗೆಯ ಪುಗ್ಗೆ ಕಾಣುವ ಹಾಗೆ ಇಲ್ಲಿನ ಪಾತ್ರಗಳ ದೇಹದ ಮೇಲೂ, ಮನೋವಲಯದ ಒಳಗೂ ಉಬ್ಬುತಗ್ಗುಗಳು ಮೂಡಿವೆ. ಮರೆಯಾಗಿವೆ. ಆ ನೇಯ್ಗೆ ಕಾಣದಂತೆ ಮಾಡಲು ನುರಿತ ಪ್ಲಾಸ್ಟಿಕ್ ಸರ್ಜನನಿದ್ದಾನೆ. ಪಳಗಿದ ರಾಜಕಾರಣಿಯಿದ್ದಾಳೆ. ಕಾದಂಬರಿಯುದ್ದಕ್ಕೂ ಹರಡಿಕೊಂಡಿರುವ ಲೀಸಾ ಸಾಲಿಂಜರ್ ಎಂಬ ವ್ಯಕ್ತಿ ನಮ್ಮಲ್ಲೇ ಯಾರೊಬ್ಬರೂ ಆಗಿರಬಹುದಾದ ಸಾಧ್ಯತೆಯೇ ಬೆಚ್ಚಿ ಬಿಳಿಸುವಂತಿದೆ. ನೀಳಬೆರಳ್ನಿಮಿರ್, ನಿಮ್ನಬೆರಳ್ಮಡಿಸ್ ಪದಗಳ ಅರ್ಥವನ್ನು ಈ ಕಥನ ಸಾಗರದಲ್ಲಿ ಧುಮುಕಿಯೇ ತಿಳಿಯಬೇಕು! ’ ಎಂಬುದಾಗಿ ಹೇಳಿದ್ದಾರೆ.
ಲೇಖಕಿ ಸೌಮ್ಯ ಕಲ್ಯಾಣ್ ಕರ್ ಕೃತಿಯಲ್ಲಿ ಹೇಳುವಂತೆ, ‘ಮನುಷ್ಯ ತನ್ನ ಬದುಕಿನ ಆಯುಷ್ಯವನ್ನು ಎಳೆದಂತೆ ತನ್ನ ಸೌಂದರ್ಯದ ಆಯುಷ್ಯವನ್ನೂ ಹೆಚ್ಚಿಸುವ ಕಾರ್ಯಕ್ಕೆ ಇಳಿದಿರುವುದು ತೀರಾ ಹೊಸದೇನೂ ಅಲ್ಲವಾದರೂ ಸಿನಿಮಾ ತಾರೆಯರಿಗೋ, ಜಾಹೀರಾತಿನ ರೂಪದರ್ಶಿಗಳಿಗೋ ಸೀಮಿತವಾಗಿದ್ದ ಸೌಂದರ್ಯವರ್ಧಕ/ಸೌಂದರ್ಯೊಪಾಸಕ ಚಿಕಿತ್ಸೆಗಳು ಸಾಮಾನ್ಯ ಜನರಿಗೂ ಎಟುಕುವಂತಾಗಿ ಅವರದಕ್ಕೆ ಹಾತೊರೆಯುವಂತಾಗಿದ್ದು, ಅಚ್ಚರಿಯ ವಿಷಯ. ತನ್ನ ಇಗೋ ಸರ್ವೈವಲ್ಲಿಗಾಗಿ, ಸೋಶಿಯಲ್ ಆಕ್ಸೆಪ್ಟೆನ್ಸಿಗಾಗಿ ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳುವ ಅವನ ಮಾನಸಿಕ ಸ್ಥಿತಿ, ಪಡುವ ಪ್ರಯಾಸಗಳು ಬೆರಗು,ಹೆದರಿಕೆ ಎರಡೂ ಹುಟ್ಟಿಸಿದವು. ಅಯ್ಯೋ ಮನುಷ್ಯ ಪ್ರಾಣಿಯೇ, ಅದೆಷ್ಟು ಸಂಕೀರ್ಣ ಬದುಕು! ಅಂತೆಯೇ ತಾನೇ ಅಮರಶಿಲ್ಪಿ ಜಕಣಾಚಾರಿಯ ಪುನರ್ಜನ್ಮ ಎಂದು ಭ್ರಮೆಗೆ ಬಿದ್ದ ಮಲೀಕನಂತಹ ವೈದ್ಯನ ಬದುಕು, ಆತನ ಕೈಗೆ ಸಿಕ್ಕ ಸುಮಂತಾಳ ಕಾಯ ಪಲ್ಲಟ, ಕಸ್ತೂರಿ, ಪಪರಿ, ಹನಿ, ಸಿದ್ಧಿಕಿ, ಎಲ್ಲ ಪಾತ್ರಗಳೂ ವಿಚಿತ್ರ ಸಂವೇದನೆ ಹುಟ್ಟಿಸಿದವು. ಕಪ್ಪು, ಬಿಳುಪಿನ ಮಧ್ಯೆಯೇ ಸುಳಿದಾಡುವ ಇವರೆಲ್ಲರೂ ನನಗೆ ವೈಯಕ್ತಿಕವಾಗಿ ಬದುಕು ದೊಡ್ಡದು, ಯಾವುದೇ ತಪ್ಪುಗಳಾದರೂ ಸುಧಾರಿಸಿಕೊಳ್ಳುವ ಅವಕಾಶವನ್ನು ಕೊಟ್ಟೇ ಕೊಡುತ್ತದೆಂಬ ನಂಬಿಕೆಯನ್ನು ಹುಟ್ಟಿಸಿದರು. ಎಷ್ಟು ಬಗೆಯ ಶೇಡ್ಸ್ ಬೂದು ಬಣ್ಣದಲ್ಲಿ! ಕಪ್ಪಾಗುವವರೆಗೂ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳಲೇಬೇಕು’ ಎಂದಿದ್ದಾರೆ.
