ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು / Kavirajamarga Mattu Kannada Jagattu
Author: K.V. Subbanna
Pages: 127
Edition: 2009
Book Size: 1/8th Demmy
Binding: Paper Back
Publisher: Akshara Prakashana Heggodu
Description
ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು / Kavirajamarga Mattu Kannada Jagattu – ಕನ್ನಡದ ಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗ. ಈ ಗ್ರಂಥವು ತನ್ನ ಕಿರುಭಾಷೆಯ ಅಂಗೈನೆಲದಲ್ಲಿ ಪ್ರಪಂಚವನ್ನು ಆವಾಹಿಸಿ, ಅರಗಿಸಿ ಕನ್ನಡವೆಂಬ ನಿಸ್ಸೀಮೆಯ ಪ್ರತಿಜಗತ್ತನ್ನು ಸೃಷ್ಟಿಸಿಕೊಳ್ಳುವ ಬಗೆಯನ್ನು ಚಿಂತಿಸುತ್ತದೆ. ‘ಕವಿರಾಜಮಾರ್ಗ’ ದಲ್ಲಿನ ಒಂದು ಕಿರು ಕಂದಪದ್ಯವು ಅದನ್ನು ಮನೋಜ್ಞವಾಗಿ ವಿವರಿಸುತ್ತದೆ. ‘ಕಾವೇರಿಯಿಂದಂ-ಆ – ಗೋದಾವರಿವರಂ – ಇರ್ದ – ನಾಡು – ಅದು ಆ ಕನ್ನಡದೊಳ್‌ಭಾವಿಸಿದ ಜನಪದಂ’. ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಲಿಕ ಘಟಕವಷ್ಟೇ ಅಲ್ಲ; ಅದು ‘ಭಾವಿತ’ವಾದದ್ದು; ‘ಕನ್ನಡ’ ವೆಂಬುದರ ಒಳಗಡೆ — ಆ ಚಿಪ್ಪಿನ ಒಳಗೆ ಎನ್ನಿ — ‘ಭಾವಿತ’ ವಾದದ್ದು. ಅಂದರೆ, ‘ಕನ್ನಡ’ ವೆಂಬುದು ಒಂದು ಚಿತ್-ಜಗತ್ತು, ಒಂದು ಕಣಸು, ದರ್ಶನ; ಮೊದಲು ಚಿತ್ – ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ್ಮಿತಗೊಂಡಿದೆ. ಮತ್ತು ಇದು, ‘ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ವಸುಧಾ (ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು ‘ವಲಯ’ ಅಷ್ಟೇ; ಮತ್ತು ‘ಕನ್ನಡ’ ವೆಂಬ ‘ವಿಷಯ’ (ನಾಡು) ವು ಆ ವಸುಧಾವಲಯದಲ್ಲಿ ‘ವಿಲೀನ’ ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ ‘ವಿಶೇಷ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ – ಇದು ‘ವಿಶದ’ ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ಯಾಕೆಂದರೆ ಇದು, ‘ವಸುಧಾವಲಯ ವಿಲೀನ, ವಸುಧೆಯ ಒಳಗಿನ ಒಂದು ಕಿರುಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ‘ಕನ್ನಡ’ ದ ಇಂಥ ಪ್ರತಿಮೆಯನ್ನು ‘ಕವಿರಾಜಮಾರ್ಗ’ವು ಕಂಡರಿಸಿಟ್ಟಿದೆ.
