ಚಿತ್ತರಂಗ / Chittaranga
Author: Asha Raghu
Pages: 308
Edition: 2023
Book Size: 1/8th Demmy
Binding: Paper Back
Publisher: Sahityaloka Publications
Description
ಚಿತ್ತರಂಗ / Chittaranga – ಅಂತರಂಗ ಮತ್ತು ಬಹಿರಂಗವನ್ನು ಏಕಕಾಲಕ್ಕೆ ದರ್ಶನ ಮಾಡಿಸುವುದು ಅಷ್ಟು ಸುಲಭವಲ್ಲ. ಲೌಕಿಕದಲ್ಲಿ ಮುಳುಗಿದಾಗ ಅಲೌಕಿಕ ರುಚಿಸುವುದಿಲ್ಲ, ರಾಗ, ರತಿ, ಆಕರ್ಷಣೆ, ಅತಿರೇಕ ಮತ್ತು ಅನೂಹ್ಯಗಳ ಮೊತ್ತದಂತಿರುವ ಚಿತ್ತರಂಗ ಕಾದಂಬರಿಯ ಅಂತರಾಳದಲ್ಲಿರುವುದು ಸ್ಮೃತಿ-ವಿಸ್ಮೃತಿಗಳ ತಾಕಲಾಟ. ಕತ್ತಲು-ಬೆಳಕು, ಸತ್ಯ-ಸುಳ್ಳು, ಅಭಿನಯ-ವಾಸ್ತವ, ಜೀವನ-ನಾಟಕಗಳ ಸಮಗ್ರ ಚಿತ್ರ. ಚಿತ್ರೋದ್ಯಮವನ್ನು ಮೂವತ್ತೆರಡು ವರ್ಷಗಳಿಂದ ಅತೀ ಹತ್ತಿರದಿಂದ ನೋಡಿದವನಾಗಿ ಹೇಳುವುದಾದರೆ, ಈ ಕಾದಂಬರಿ ಚಿತ್ರರಂಗದ ಅಂತರಂಗದ ಚಿತ್ರ. ಶಂಕರ್ನಾಗ್ ಹೇಳುತ್ತಿದ್ದ ಒಂದು ಮಾತು ಇದನ್ನು ಓದುತ್ತಿದ್ದಂತೆ ನೆನಪಿಗೆ ಬಂತು; `ಇಡೀ ಸಿನಿಮಾ ಮೊದಲು ನನ್ನ ಮನಸ್ಸಿನಲ್ಲಿ ನಡೆಯುತ್ತದೆ. ನಂತರ ಅದನ್ನು ನಾನು ಶೂಟ್ ಮಾಡುತ್ತೇನೆ.’ ಆ ಅರ್ಥದಲ್ಲಿ ಚಿತ್ರರಂಗ ಅನ್ನುವುದನ್ನು ಚಿತ್ತರಂಗ ಎಂದು ಕರೆಯುವುದೇ ಸರಿ. ನಿರ್ಮಾಪಕ, ನಿರ್ದೇಶಕ, ಕತೆಗಾರ, ಛಾಯಾಗ್ರಾಹಕ, ಸಹನಟ, ವಿಮರ್ಶಕ, ಪತ್ರಕರ್ತ, ಪ್ರೇಕ್ಷಕ- ಹೀಗೆ ಚಿತ್ರರಂಗವೆಂಬುದು ಹಲವು ಸ್ತರಗಳ ಜಗತ್ತು. ಅಲ್ಲಿ ಎದುರಾಗುವ ಪ್ರತಿಯೊಂದು ಪಾತ್ರವೂ ಸತ್ಯ ಸುಳ್ಳುಗಳ ನಡುವೆ ತುಯ್ದಾಡುತ್ತಿರುತ್ತದೆ. ನಿಜವಾದ ಸ್ನೇಹವಾಗಲೀ, ಪ್ರೀತಿಯಾಗಲೀ, ಮೆಚ್ಚುಗೆಯಾಗಲೀ, ವಿಮರ್ಶೆಯಾಗಲಿ ಅಲ್ಲಿ ಸಿಗುವುದಕ್ಕೆ ಸಾಧ್ಯವೇ ಇಲ್ಲ. ನನ್ನ ಮೆಚ್ಚಿನ ನಟಿ ಗ್ರೇಟಾ ಗಾರ್ಬೋ ಹೇಳುತ್ತಾಳೆ; ನಾನು ಒಂಟಿತನವನ್ನು ಇಷ್ಟಪಡುತ್ತೇನೆ ಅಂತ ಹೇಳುತ್ತಿಲ್ಲ. ನನ್ನನ್ನು ಒಂಟಿಯಾಗಿರಲು ಬಿಡಿ ಎನ್ನುತ್ತಿದ್ದೇನೆ. ಇವೆರಡರ ನಡುವೆ ದೊಡ್ಡ ವ್ಯತ್ಯಾಸವಿದೆ. ಅನುಭವಿ ಕಾದಂಬರಿಕಾರ್ತಿ ಆಶಾ ರಘು, ರಂಗಭೂಮಿ, ಕಿರುತೆರೆ, ಸಿನಿಮಾ, ಜೀವನ, ಪುರಾಣಗಳಿಂದ ಮೊಗೆದುಕೊಂಡ ಅನುಭವದ ಬೆಳಕಲ್ಲಿ ಚಿತ್ರಿಸಿದ ಈ ಕಾದಂಬರಿ ನನಗೆ ಹಲವು ಸತ್ಯಗಳನ್ನು ಹೊಳೆಯಿಸಿತು. ಅನುಭವವಾಗಿ ನನ್ನೊಳಗೆ ಇಳಿಯಿತು. ಇದು ಚಿತ್ತರಂಗದಲ್ಲಿ ನಡೆಯುವ ಮಹೋನ್ನತ ಚಿತ್ರರತ್ನ ಎಂದು ಲೇಖಕ ಜೋಗಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
